Technology Behind Aadhaar Card

ಆಧಾರ್ ತಂತ್ರಜ್ಞಾನ

ಎಲ್ಲರಿಗೂ ಆತ್ಮೀಯ  ನಮಸ್ಕಾರ.  ಇವತ್ತಿನ ದಿನ ನಾವು ಆಧಾರ್ ತಂತ್ರಜ್ಞಾನದ ವಿಷಯದಡಿ ಆಧಾರ್ ಎಂದರೇನು,  ಆಧಾರ್ ನಮಗೆ ಏಕೆ ಬೇಕು ? ಆಧಾರನ ಹಿನ್ನಲೆ, ಆಧಾರ ಕಾರ್ಡಿನ  ಉಪಯೋಗಗಳು, ಭಾರತದ ವಿವಿಧ ಇಲಾಖೆಗಳು ಆಧಾರ್ ಅನ್ನು ಹೇಗೆ ಬಳಸುತ್ತಿವೆ ? ಆಧಾರನ ಗೌಪ್ಯತೆ ಹಾಗು  ಆಧಾರ API ಇತ್ಯಾದಿ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.  

ಆಧಾರ್ ಎಂದರೇನು ?

ಮನುಷ್ಯ ಸಂಘ ಜೀವಿ. ನಾವೆಲ್ಲರೂ ಗುಂಪಿನಲ್ಲಿರಲು ಬಯಸುತ್ತೇವೆ. ಅಲ್ಲದೆ ನಾವು ಪ್ರತಿ ದಿನ ಬೆಳಿಗ್ಗೆ ಇಂದ ರಾತ್ರಿಯವರೆಗೆ ಒಂದಲ್ಲ ಒಂದು ಸಂಸ್ಥೆ ಅಥವಾ ವ್ಯಕ್ತಿಯ ಜೊತೆ ಸಂವಹನ ನಡೆಸುತ್ತಿರುತ್ತೇವೆ. ಉದಾಹರಣೆಗೆ ಬೆಳೆಗ್ಗೆ ನಮ್ಮ ಕೈ ಸೇರುವ ದಿನಪತ್ರಿಕೆ ಒಂದು ಸಂಸ್ಥೆಯ ಕೊಡುಗೆ. ನಂತರ ಬರುವ ಹಾಲಿನ ಪ್ಯಾಕೆಟ್ ಮತ್ತೊಂದು ಸರಕಾರಿ ಅಥವಾ ಖಾಸಗಿ ಸಂಸ್ಥೆಗೆ ಸೇರಿರುತ್ತದೆ. ನಂತರ ನಮ್ಮ ಕೆಲಸ, ಕಚೇರಿಗಳಿಗೆ ಹೋಗಲು ಸರಕಾರಿ ಅಥವಾ ಖಾಸಗಿ ಸಂಸ್ಥೆಯ ವಾಹನ ವನ್ನು ಬಳಸುತ್ತೇವೆ. ದಿನ ನಿತ್ಯದ ಖರ್ಚುಗಳಿಗೆ ಬ್ಯಾಂಕ್ ಮತ್ತು ಎಟಿಎಂ ಸೇವೆಯನ್ನು ಅವಲಂಬಿಸಿದ್ದೇವೆ. ಹೀಗೆಯೇ ಒಟ್ಟಾಗಿ ಹೇಳಬೇಕೆಂದರೆ  ನಮ್ಮ ನಿತ್ಯ ಜೀವನದ ನಿರ್ವಹಣೆಗೆ ನಾವು ಬೇರೆ ಬೇರೆ ಸಂಸ್ಥೆಯ ಸೇವೆಗಳನ್ನು ಬಳಸುವುದು ಅನಿವಾರ್ಯ! ಅಲ್ಲದೆ ನಾವೂ ಕೂಡ ಒಂದಲ್ಲಾ ಒಂದು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಬೇರೆಯವರು ತಮ್ಮ ಅಗತ್ಯಗಳಿಗಾಗಿ ನಮ್ಮನ್ನು ಅವಲಂಬಿಸಿರುತ್ತಾರೆ !!

ಪ್ರತೀ ಸಂಸ್ಥೆಯಲ್ಲಿಯೂ ಅನೇಕ ಸದಸ್ಯರಿರುತ್ತಾರೆ. ಪ್ರತೀ ಸಂಸ್ಥೆಯೂ ತನ್ನ ಸದಸ್ಯರನ್ನು ಗುರುತಿಸಲು ಅಥವಾ ಸೇವೆಯನ್ನು ಒದಗಿಸಲು ತನ್ನದೇ ಆದ ಒಂದು ID Card ಅಂದರೆ ಗುರುತು ಪತ್ರವನ್ನು  ಹೊಂದಿರುತ್ತದೆ. ಉದಾಹರಣೆಗೆ  ಕರ್ನಾಟಕ ರಾಜ್ಯ ಸರಕಾರವು ಪ್ರತಿದಿನ ಬಸ್ ಮುಖಾಂತರ ಶಾಲೆ, ಕಾಲೇಜು ಹಾಗು ಕಚೇರಿಗಳಿಗೆ ತೆರಳುವ ನಾಗರಿಕರಿಗಾಗಿ ರಿಯಾಯತಿ ಬಸ್ ಪಾಸ್ ಅನ್ನು ಜಾರಿಗೆ ತಂದಿರುತ್ತದೆ. ಈ ಕಾರಣಕ್ಕಾಗಿ ಕೊಡಮಾಡುವ ಬಸ್ ಪಾಸ್ ಕೇವಲ ಕರ್ನಾಟಕದಲ್ಲಿ ಮಾತ್ರ ಮತ್ತು ನಿರ್ದಿಷ್ಟ ಸರಕಾರಿ ಬಸ್ ಗಳಲ್ಲಿ ಮಾತ್ರ ಅನ್ವಯ. ಹಿರಿಯ ನಾಗರಿಕಗಾಗಿ ಕೊಡುವ ಸೀನಿಯರ್ ಸಿಟಿಜನ್ ಕಾರ್ಡ್ ಎಂಬ ಸೌಲಭ್ಯವು  ಉತ್ತಮ ಸೇವೆ ಆಗಿದ್ದರೂ ಕೇವಲ ಕರ್ನಾಟಕದಲ್ಲಿ ಮತ್ತು ಸರಕಾರಿ ಸಾರಿಗೆಗಳಲ್ಲಿ ೬೦ ವರ್ಷ ಮೇಲ್ಪಟ್ಟವರಿಗೆ ಮಾತ್ರ ಮಾನ್ಯ. ಇದೇ ರೀತಿ ವಾಹನ ಚಾಲನಾ ಪತ್ರ ಅಥವಾ ಲೈಸೆನ್ಸ್ ೧೮ ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಭ್ಯ. ಹಾಗೆಯೆ PAN Card ತೆರಿಗೆ ತುಂಬುವವರಿಗೆ ಮಾತ್ರ ಲಭ್ಯ. ಇದೆ ತರಹ voter‘s  ಕಾರ್ಡ್, ರೇಷನ್ ಕಾರ್ಡ್, BPL ಕಾರ್ಡ್ ಇತ್ಯಾದಿ ಕಾರ್ಡಗಳು ನಿರ್ದಿಷ್ಟ ಸೇವೆ ಮತ್ತು ನಿರ್ದಿಷ್ಟ ಜನರಿಗೆ ಮಾತ್ರ ನೀಡಲ್ಪಟ್ಟಿವೆ. ಅಂದರೆ ಇದುವರೆಗೆ ಭಾರತ ಸರಕಾರ ನೀಡಿದ ಪ್ರತಿಯೊಂದು ಗುರುತು ಪತ್ರವು ಕೆಲವು ಇಲಾಖೆಗೆ ಸೀಮಿತ ಮತ್ತು ನಿರ್ದಿಷ್ಟ ಸೇವೆಗಳಿಗಾಗಿ ಮಾತ್ರ ಅನ್ವಯವಾಗಿದ್ದವು.

ಆದರೆ ಇತ್ತೀಚಿಗೆ UIDAI ನಿಂದ ಅಂದರೆ ಯುನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಒಫ್ ಇಂಡಿಯಾ ಅಥವಾ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರವು ಕೇಂದ್ರ ಸರಕಾರದಡಿಯಲ್ಲಿ ಬರುವ ಸಂಸ್ಥೆಯಿಂದ ಜಾರಿಮಾಡಿರುವ ಆಧಾರ್ ಕಾರ್ಡ್ ಎಲ್ಲರಿಗೂ ಲಭ್ಯ, ಎಲ್ಲಾ ಸೇವೆಗಳನ್ನು ಪಡೆಯಲು ಬಳಸಬಹುದು ಮತ್ತು ಉಚಿತವಾಗಿ ಲಭ್ಯ - ಇಲ್ಲಿ ಸಂಸ್ಥೆ, ಜಾತಿ, ಲಿಂಗ ಅಥವಾ ವಯಸ್ಸು ಗಣನೆಗೆ ಬರುವುದಿಲ್ಲ. ಭಾರತದ ಭೌಗೋಳಿಕ ವಿಳಾಸ ಹೊಂದಿದ ಯಾರೇ ಆದರೂ ಆಧಾರ್ ಕಾರ್ಡನ್ನು ಪಡೆಯಹುದು, ವಿದೇಶಿಯರು ಕೂಡ. ಆಧಾರ್ ಕಾರ್ಡ್ ಗೆ ಮತ್ತು ಭಾರತೀಯ ಪೌರತ್ವಕ್ಕೆ ಯಾವುದೇ ಸಂಭಂದ ಇರುವುದಿಲ್ಲ.  ಅಲ್ಲದೆಯೇ ಇಲ್ಲಿ ಬೇರೆ ಕಾರ್ಡಗಳಂತೆ ಭೌತಿಕವಾದ ಕಾರ್ಡ್ಗೆ ಯಾವುದೇ ಬೆಲೆ ಇಲ್ಲ. ಇಲ್ಲಿ ಮುಖ್ಯ ವಾಗಿರುವುದು ೧೨ ಅಂಕಿಯ ಆಧಾರ್ ಸಂಖ್ಯೆ - ಭಾರತ ಸರಕಾರದ ಗಣಕ ಯಂತ್ರಗಳಲ್ಲಿನ CIDR ಅಂದರೆ Central Identities Data Repository ನಲ್ಲಿ ಭದ್ರವಾಗಿ ಅಡಕವಾಗಿರುತ್ತದೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರನ್ನು ಗುರುತಿಸಲು ಮತ್ತು ಸರಕಾರದ ಸೌಲಭ್ಯಗಳನ್ನು ಪಡೆಯಲು ನಮಗೆ ಬೇಕಾಗಿರುವುದು ಕೇವಲ  ೧೨ ಅಂಕಿಯ ಆಧಾರ ಸಂಖ್ಯೆ. ಇಲೆಕ್ಟ್ರಾನಿಕ್ ಆಧಾರಿತ ಆಧಾರ್ ಕಾರ್ಡ್ ಅಥವಾ ಕೇವಲ ಆಧಾರ್ ನಂಬರ್ ಎರಡೂ ಪ್ರಿಂಟ್ ಮಾಡಿದ ಆಧಾರ್ ಕಾರ್ಡ್ ನಷ್ಟೇ ಮಾನ್ಯ.  

 

ಆಧಾರನ ಮುಖ್ಯ ಉಪಯೋಗ ಪ್ರತಿಯೊಬ್ಬನಿಗೂ ಅನ್ವಯವಾಗುವಂತಹ ಗುರುತು ಪತ್ರ ನೀಡುವಂತಹದು. ಇದನ್ನು ದೇಶದ ಎಲ್ಲೆಡೆಯೂ ಬಳಸಬಹುದು ಮತ್ತು ಗಣಕೀಕೃತ ರೂಪದಲ್ಲಿ ಲಭ್ಯ. ಒಬ್ಬ ವ್ಯಕ್ತಿಯ ಮರಣಾನಂತರ ಅವನ ಆಧಾರ ಸಂಖ್ಯೆಯನ್ನು ಬೇರೆಯವರಿಗೆ ವರ್ಗಾಯಿಸುವುದಿಲ್ಲ. ಇವತ್ತಿನ ದಿನದವರೆಗೆ ೧೧೧ ಕೊಟಿ ಜನರಿಗೆ ಆಧಾರ್ ಕಾರ್ಡ್ ಅನ್ನು ವಿತರಿಸಲಾಗಿದ್ದು ಹೊಸ ನೋಂದಣಿಗಳು ಚಾಲ್ತಿಯಲ್ಲಿವೆ.  ೧೮ ವರ್ಷ ಮೇಲ್ಪಟ್ಟ ಶೇ. ೯೯ ಭಾರತೀಯರು ಆಧಾರ್ ಕಾರ್ಡ್ ಅನ್ನು ಹೊಂದಿದ್ದಾರೆ.  ಕರ್ನಾಟಕ ರಾಜ್ಯದಲ್ಲಿ ೬ ಕೋಟಿಗೂ ಹೆಚ್ಚು ಜನ ಆಧಾರ್ ಕಾರ್ಡ್ ಅನ್ನು ಹೊಂದಿದ್ದಾರೆ.           

ಆಧಾರ್ ನಮಗೆ ಏಕೆ ಬೇಕು ?

ಭಾರತ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿರುವುದರಿಂದ, ನಾವು ಯಾವುದೇ ಸರಕಾರಿ ಅಥವಾ ಖಾಸಗಿ ಸೇವೆ, ಸೌಲಭ್ಯ ಗಳನ್ನು ಪಡೆಯಲು ಉದ್ದುದ್ದ ಸರದಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾಯುವುದು ಸಹಜ. ಜೊತೆಗೆ ನಮ್ಮ ಭಾವಚಿತ್ರ, ವಿಳಾಸ, ಎಲ್ಲ ತರಹದ ಗುರುತಿನ ಚೀಟಿಗಳು, ಸರಿಯಾದ ಹೆಸರು, ಹುಟ್ಟಿದ ದಿನಾಂಕ, ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ಕೊಡುವ ಕಿರಿಕಿರಿ ಬೇರೆ !     ಅಲ್ಲದೆ ಇವುಗಳ ನಕಲು ಪ್ರತಿ ಮುದ್ರಿಸಲು ಆಪಾರ ಪ್ರಮಾಣದ ಕಾಗದವು ಖರ್ಚಾಗಿ ಪರಿಸರವು ಹಾನಿಗೊಳ್ಳುವುದು ಅನಿವಾರ್ಯ… ಆಧಾರ್ ನಂಬರ್ ಕೊಡುವುದರಿಂದ ಬೇರೆ ಯಾವುದೇ ಗುರುತಿನ ಚೀಟಿಗಳನ್ನು ಕೊಡಬೇಕಾದ ಅಗತ್ಯವಿರುವುದಿಲ್ಲ. ಈಗ ತಂತ್ರಜ್ಞಾನ ಮುಂದುವರೆದಿದ್ದರಿಂದ ಎಲ್ಲ ಸೇವೆಗಳು ಕಂಪ್ಯೂಟರ್ ಮತ್ತು ಮೊಬೈಲ್ ಮುಖಾಂತರ  ಬೆರಳ ತುದಿಯಲ್ಲಿ ಲಭ್ಯವಾಗಿವೆ. ಸರಕಾರಿ ಅಥವಾ ಖಾಸಗಿ ಸೇವೆ ಪಡೆಯುವಾಗ ನಿಮ್ಮ ಆಧಾರ್ ನಂಬರನ್ನು ಕೊಡಿ, ಮುಂದೆ ಅವರು ಅತ್ಯಾಧುನಿಕ ekyc (ಇಲೆಕ್ಟ್ರಾನಿಕ್  ನೋ ಯುವರ್ ಕಸ್ಟಮರ್) ವ್ಯವಸ್ಥೆ ಮುಖಾಂತರ ನಿಮಗೆ ಸಂಭಂದಿಸಿದ ಎಲ್ಲ ವಿವರ ಗಳನ್ನು ೨ ರಡೆ ನಿಮಿಷಗಳಲ್ಲಿ ತಮ್ಮ ಗಣಕಯಂತ್ರಕ್ಕೆ ಪಡೆದುಕೊಳ್ಳುತ್ತಾರೆ. ಈ ಪ್ರಕ್ರಿಯಲ್ಲಿ ನೀವು ನಿಮ್ಮ ಆಧಾರ ಸಂಖ್ಯೆಯನ್ನು ಕೊಟ್ಟು (ಆಧಾರ ಕಾರ್ಡ್ ಬೇಕಾಗಿಲ್ಲ) ಅಲ್ಲಿರುವ ಬಯೊಮೀಟ್ರಿಕ್ ಅಥವಾ ಬೆರಳಚ್ಚು ಸಾಧನದ ಮೇಲೆ ನಿಮ್ಮ ಬೆರಳನ್ನು ಒತ್ತಿದರೆ ಸಾಕು. ಇದಾದ ಕ್ಷಣ ಮಾತ್ರದಲ್ಲಿ ನಿಮ್ಮ ದಾಖಲೆಗಳನೆಲ್ಲ ಖಚಿತಪಡಿಸಿಕೊಳ್ಳುತ್ತಾರೆ. ನೀವು ಇತ್ತೀಚಿಗೆ ಯಾವುದಾದರೂ ಖಾಸಗಿ ಮೊಬೈಲ್ ಸಂಪರ್ಕ ಸೇವೆಯನ್ನು ಪಡೆಯಲು ಹೋಗಿದ್ದರೇ ಈ ಹೊಸ ಪ್ರಕ್ರಿಯೆಯನ್ನು ಗಮನಿಸಿರಬಹುದು. ನೀವು ಊಹಿಸಿದ ಹಾಗೆ ಇದರಿಂದ ಪರಿಸರ ಸಂರಕ್ಷಣೆಯು ಆಗುತ್ತದೆ. ಏಕೆಂದರೆ ಸಾಂಪ್ರದಾಯಿಕ ಮಾದರಿಯಲ್ಲಿ ನಮ್ಮ ಎಲ್ಲ ಕಾಗದ ದಾಖಲೆಗಳನ್ನು ಜೋಪಾನ ವಾಗಿಡಲು ಪ್ರತಿ ೩ ವರ್ಷಕೊಮ್ಮೆ ೧೦ ಲಕ್ಷ ಮರಗಳನ್ನು ಬಲಿ ಕೊಡಲಾಗುತ್ತದೆ.

ಆಧಾರ ಹಿನ್ನಲೆ

1999 ರ ಕಾರ್ಗಿಲ್ ಯುದ್ಧದ ನಂತರ ಗಡಿ ಪ್ರದೇಶದ ಹಳ್ಳಿಗಳ ನಾಗರಿಕರಿಗಾಗಿ ಒಂದು ಆದ್ಯತೆಯ ಮೇರೆಗೆ ಗುರುತಿನ ಚೀಟಿ ನೀಡಬೇಕು ಎಂದು ನಿಶ್ಚಯಿಸಲಾಗುತ್ತದೆ.  

ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಕೇಂದ್ರ ಸರ್ಕಾರದ ಆಶ್ರಯ ಅಡಿಯಲ್ಲಿನ ಯೋಜನಾ ಆಯೋಗದಲ್ಲಿ 28 ನೇ ಜನವರಿ ೨೦೦೯ ರಲ್ಲಿ ಶ್ರೀ ನಂದನ್ ನಿಲೇಕಣಿ ಅವರ ಅಧ್ಯಕ್ಷತೆಯಲ್ಲಿ ಒಂದು ಕಚೇರಿಯನ್ನಾಗಿ ಸೇರಿಸಲಾಯಿತು. ಇದರ ಉದ್ದೇಶ ಭಾರತದ ಪ್ರತಿಯೊಬ್ಬ ನಿವಾಸಿಗೂ ಆಧಾರ್ ಎಂಬ 12 ಅಂಕಿಯ ಅನನ್ಯ ಗುರುತಿನ ಸಂಖ್ಯೆಯನ್ನು  ನಿವಾಸಿಯ  ಮೂಲ ಹೆಸರು, ಹುಟ್ಟಿದ ದಿನಾಂಕ, ಲಿಂಗ,  ವಿಳಾಸ, ಬಯೋಮೆಟ್ರಿಕ್ ಮಾಹಿತಿ, ಛಾಯಾಚಿತ್ರ,  ಹತ್ತು  ಬೆರಳುಗಳು, ಎರಡು ಐರಿಸ್ ಸ್ಕ್ಯಾನ್ ಮತ್ತು ಯಾಚ್ಚಿಕವಾಗಿ ಮೊಬೈಲ್ ಹಾಗು ಇಮೇಲ್ ವಿಳಾಸ ಗಳನ್ನು ಒಂದು ಕೇಂದ್ರೀಕೃತ ಡೇಟಾಬೇಸ್ ನಲ್ಲಿ ಸಂಗ್ರಹಿಸಿಕೊಂಡು ೦ ಮತ್ತು ೧ ನಿಂದ ಪ್ರಾರಂಭವಾಗದ ಒಂದು ರ್ಯಾಂಡಮ್ / ಯಾದೃಚ್ಛಿಕ ಸಂಖ್ಯೆಯನ್ನು  ನೀಡುವುದು. ಯುಐಡಿಎಐ ಡಾಟಾ ಸೆಂಟರ್ನ ಕೈಗಾರಿಕಾ ಮಾದರಿ ಟೌನ್ಶಿಪ್ (IMT) , ಮನೇಸರ್, ಹರ್ಯಾಣ ದಲ್ಲಿ ಮತ್ತು ಬೆಂಗಳೂರುನಲ್ಲಿಯೂ ಇದ್ದು, ಇದು ಭಾರತದ ಮೊದಲ ಬ್ಲಾಸ್ಟ್, ಪ್ರವಾಹ ಹಾಗು  ಭೂಕಂಪ ನಿರೋಧಕ ಕಟ್ಟಡವಾಗಿದೆ.

ಆಧಾರ ಕಾರ್ಡಿನ  ಉಪಯೋಗಗಳು

ಆಧಾರನ ದೃಡೀಕರಣ ಸೇವೆಯನ್ನು ನಾವು ಹಲವು ಸೇವೆಗಳಲ್ಲಿ ಬಳಸಬಹುದು. ಮೊದಲನೆಯದಾಗಿ citizen - services ಅಂದರೆ ನಾಗರೀಕ ಸೇವೆಗಳು - ಇದರಲ್ಲಿ  ಚಾಲನಾ ಪತ್ರ, passport ಸೇವೆಗಳು, ವಿಮಾನ ನಿಲ್ದಾಣ ಪ್ರವೇಶ, ತೆರಿಗೆಗೆ ಸಂಬಂಧ ಪಟ್ಟ ಕೆಲಸಗಳು ಸೇರಿವೆ.  ಎರಡನೆಯದಾಗಿ eKYC ಸೌಲಭ್ಯ ಬಳಸುವಂತಹವುವು - ಇದರಲ್ಲಿ Bank ಕಿಗೆ ಸಂಭಂದ ಪಟ್ಟ ಸೇವೆಗಳು, ದೂರವಾಣಿ ಸಂಪರ್ಕ್ ಪಡೆಯಲು, ಮೈಕ್ರೋ ಎಟಿಎಂ ಸೇವೆ ಬಳಸಲು, ಸಿಮ್ ಕಾರ್ಡ್ ಪಡೆಯಲು, ಜೀವ ವಿಮೆ ಇತ್ಯಾದಿ ಸೇವೆಗಳು ಸೇರಿವೆ.  ಮೂರನೆಯದಾಗಿ  ಎಲ್ಪಿಜಿ ಸಂಪರ್ಕ, ಆಹಾರ, ರಿಯಾಯಿತಿ ಪಡಿತರ ಚೀಟಿ, ಸೀಮೆಎಣ್ಣೆ, ನೀರು, ವಿದ್ಯುತ, ಗೊಬ್ಬರ ಇತ್ಯಾದಿಗಳಿಗಾಗಿ ಸರಕಾರದ  ಸಹಾಯಧನ ಪಡೆಯಲು ಬಳಸಲಾಗುತ್ತಿವೆ.  ನಾಲ್ಕನೆಯದಾಗಿ ಸಮಾಜಿಕ ಭದ್ರತಾ ಯೋಜನೆಗಳಲ್ಲಿ ಅಂದರೆ ಸರ್ವ ಶಿಕ್ಷಾ ಅಭಿಯಾನ, ಜನನಿ ಸುರಕ್ಷಾ ಯೋಜನಾ, NREGA ಇತ್ಯಾದಿಗಳಿಗೆ  ಮತ್ತು ಕೊನೆಯದಾಗಿ ಚುನಾವಣೆ ಗುರುತು ಪತ್ರ ನೀಡುವಾಗ, ಮತ ಚಲಾಯಿಸುವಾಗ ಹಾಗು ಸರಕಾರಿ ಇಲಾಖೆಗಳಲ್ಲಿ ಅಧಿಕಾರಿಗಳ ದಿನನಿತ್ಯದ ಹಾಜರಾತಿಗಾಗಿಯೂ ಆಧಾರ ಸಂಖ್ಯೆಯನ್ನು ಬಳಸಲಾಗುತ್ತಿದೆ.

ಭಾರತ ದೇಶದ ಕೋಟ್ಯಂತರ ಅಗೋಚರ ನಾಗರಿಕರನ್ನು ಆಧಾರ್ ಬೆಳಕಿಗೆ ತಂದಿದೆ. ಕೇಂದ್ರ ಸರಕಾರದ ಕಲ್ಯಾಣ ಯೋಜನೆಗಳ ಲಾಭಗಳು ಹಾಗು ನಾನಾಬಗೆಯ ಸೇವೆಗಳನ್ನು ನ್ಯಾಯೋಚಿತ ಹಕ್ಕಿನಡಿ ಪಡೆಯಲು ಆಧಾರ್ ನಿರ್ಣಾಯಕ ಪಾತ್ರ ವಹಿಸಿದೆ. ಕಡು ಬಡವನು ಸೇರಿದಂತೆ ಎಲ್ಲರಿಗು ತಮ್ಮ ಹಕ್ಕು ಗಳನ್ನೂ ಸರಿಸಮನಾಗಿ ಪಡೆಯಲು ಆಧಾರ್ ಪ್ರಬಲ ಸಾಧನ ಎಂದು ವಿಶ್ವ ಸಂಸ್ಥೆ ಮೆಚ್ಚುಗೆ ವ್ಯಕ್ತ ಪಡಿಸಿದೆ. ಆಧಾರ್ ಕಾರ್ಡ್ ನಿಂದಾಗಿ ಸರಕಾರದ ಯೋಜನೆಗಳ ಲಾಭಗಳು ದಲ್ಲಾಳಿಗಳ ಹಂಗಿಲ್ಲದೆ ಬಡವರ ಕೈಸೇರಲಿವೆ. ಭಾರತ ಸರಕಾರದ ಎಲ್ಲ ಸೇವೆಗಳನ್ನು ನ್ಯಾಯೋಚಿತ ಹಕ್ಕಿನಡಿ ಪಡೆಯಲು ಆಧಾರ್ ಒಂದು ದಿಟ್ಟ ಹೆಜ್ಜೆಯಾಗಿದೆ.

ಭಾರತದ ವಿವಿಧ ಇಲಾಖೆಗಳು ಆಧಾರ್ ಅನ್ನು ಹೇಗೆ ಬಳಸುತ್ತಿವೆ ?

ಆಧಾರನ ಗೌಪ್ಯತೆ :

ಸುಪ್ರೀಂ ಕೋರ್ಟ್ ನ 24 ನೇ ಮಾರ್ಚ್ 2014ರ  ಆದೇಶದ ಪ್ರಕಾರ, ಕೇಂದ್ರ ಸರ್ಕಾರ  ಮತ್ತು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ಆಧಾರ್ಕಾರ್ಡ್  ಹೋಲ್ಡರ್ನ ಲಿಖಿತ  ಒಪ್ಪಿಗೆ ಇಲ್ಲದೆ ಯಾವುದೇ ಮೂರನೇ ಪಕ್ಷ ಅಥವಾ ಸರಕಾರಿ ಸಂಸ್ಥೆಯ ಜೊತೆ  ಡೇಟಾ ಹಂಚಿಕೊಳ್ಳುವಂತಿಲ್ಲ.  ಅಲ್ಲದೆ ಯಾರೆ ಆದರೂ ಬೇರೆಯವರ ಆಧಾರ್ ಡಾಟಾ ಅನ್ನು ಸಂಗ್ರಹಿಸುವಂತಿಲ್ಲ .

ಆಧಾರನ  ಟೋಲ್ ಫ್ರೀ ಸಹಾಯವಾಣಿ ೧೯೪೭ ಆಗಿದ್ದು  ನೆನಪಿಡಲು ಬಹಳ ಸುಲಭವಾಗಿದೆ. ಆಧಾರ್ ಕಾರ್ಡ್ ಪಡೆಯಲು ಯಾವುದೇ ವೆಚ್ಚವಿಲ್ಲ. ಆಧಾರ್ನಿಂದ ಪ್ರಯೋಜನೆಗಳೇ ಜಾಸ್ತಿ.

ಆಧಾರ API : ಆಧಾರನ ತಂತ್ರಾoಶವು  ಸಾಫ್ಟ್ವೇರ್ ಡೆವೆಲಪರ್ಗಳಿಗೆ ಲಭ್ಯವಿದ್ದು, ತಂತ್ರಾoಶ ಅಭಿವೃದ್ಧಿ ಪಡಿಸುವವರು ಆಧಾರ್ API ಗಳನ್ನು Java , .NET , PHP , Python, Android  ಇತ್ಯಾದಿ ಭಾಷೆಗಳಲ್ಲಿ ಬಳಸಬಹುದು. ಆಧಾರ್ API ಬಳಸಿ ಸಾಫ್ಟ್ವೇರ್ ದೆವೆಲಪ್  ಮಾಡುವವರು ತಮ್ಮ ಸಾಫ್ಟ್ವೇರ್ ಪ್ರೋಗ್ರಾಮ್ ಮುಖಾಂತರ ಆಧಾರ್ ಸಂಖ್ಯೆಯ ಜೊತೆಗೆ  ಆಧಾರ್ ಹೋಲ್ಡರ್ ನ  ಹೆಸರು ಅಥವಾ ಹುಟ್ಟಿದ ದಿನಾಂಕ ಅಥವಾ ಮೊಬೈಲ್ ಸಂಖ್ಯೆ ಇತ್ಯಾದಿ ಗಳನ್ನು  ಆಧಾರ್ ಸರ್ವರ್ ಗೆ ಕೊಟ್ಟು ಕಳುಹಿಸಿದರೆ ಸರ್ವರ್ ನಮಗೆ ನಾವು ಕಳುಹಿಸಿದ ಆಧಾರ್ ಸಂಖ್ಯೆ ಮತ್ತು ಹೆಸರು, ಅಥವಾ ನಾವು ಕಳುಹಿದ ಆಧಾರ್ ಸಂಖ್ಯೆ, ಹೆಸರು  ಮತ್ತು ಹುಟ್ಟಿದ ದಿನಾಂಕ ಇತ್ಯಾದಿ ಕಾಂಬಿನೇಶನ್ಗಳು ಸರ್ವರ್ ನಲ್ಲಿಯ ಡೇಟಾಬೇಸ್ಗೆ ಹೋಲಿಸಿ ಸರಿಯೋ ತಪ್ಪೋ ಎಂದು ದೃಡೀಕರಿಸುತ್ತದೆ. ಇಲ್ಲಿ ಗಮನಿಸಬೇಕಾದ ಆಂಶವೇನೆಂದರೆ ಯಾರೆಯಾಗಲಿ ಬೇರೆಯಾರದೋ ಆಧಾರ್ ಸಂಖ್ಯೆಯನ್ನು ಬಳಸಿ ಬೇರೆಯವರ  ಹೆಸರು, ವಿಳಾಸ ಇತ್ಯಾದಿ ಮಾಹಿತಿ ಗಳನ್ನೂ ಪಡೆಯಲು ಬರುವುದಿಲ್ಲ.  ಬೇರೆಯವರ ಬೆರಳಚ್ಚು ಅಥವಾ ಆಧಾರ್ ಸರ್ವರ್ ನಿಂದ ಬೇರೆಯವರ ಮೊಬೈಲ್ಗೆ ಕಳುಹಿಸಿದ OTP ಯನ್ನು ನೋಂದಾಯಿಸರೆ ಮಾತ್ರ ನಾವು ಬೇರೆಯವರ ಮಾಹಿತಿಯನ್ನು ನೋಡಬಹುದು. ಇದರ ಆರ್ಥ ನಮ್ಮ ಪರವಾನಿಗೆ ಇಲ್ಲದೆ ಬೇರೆಯವರು ನಮ್ಮ ಆಧಾರ್ ಮಾಹಿತಿ ನೋಡುವಂತಿಲ್ಲ.  ಆಧಾರ್ ನ ರಚನೆಯಲ್ಲಿ open -source  ಅಂದರೆ ಸ್ವತಂತ್ರ ಅಥವಾ ಮುಕ್ತ ತಂತ್ರಾಂಶ, vendor  - neutral, platform - independent ಅಂದರೆ ಯಾವುದೇ ನಿರ್ದಿಷ್ಟ ತಂತ್ರಾಂಶವನ್ನು ಬಳಸದೆ,   2048-bit asymmetric encryption key ಅಂದರೆ 2048-ಬಿಟ್ ಅಸಮ್ಮಿತ ಗೂಢಲಿಪೀಕರಣ ಬಳಸಿದ್ದಾರೆ. ಬೆಂಗಳೂರು ಮತ್ತು ಹರ್ಯಾಣದಲ್ಲಿನ ಎರಡೂ ಆಧಾರ್ ಡಾಟಾಸೆಂಟರ್ ಗಳು ದಿನಕ್ಕೆ ೧೦ ಕೋಟಿ ಆಧಾರ್ ದೃಡೀಕರಣ ಮಾಡುವಷ್ಟು ಶಕ್ಯವಾಗಿವೆ. ಆಧಾರ್ ಡೇಟಾಬೇಸ್ ಪ್ರಪಂಚದ ಅತಿದೊಡ್ಡ ರಾಷ್ಟ್ರೀಯ ಗುರುತಿನ ಸಂಖ್ಯೆ ಯೋಜನೆಯಾಗಿದ್ದು mongoDB  ಡೇಟಾಬೇಸ್ ನಲ್ಲಿ ಹಲವಾರು Peta-Bytes ನಷ್ಟು ದತ್ತಾಂಶ ಸಂಗ್ರಹವಾಗಿದೆ.  ಮುಂದಿನ ದಿನಗಳಲ್ಲಿ ಆಧಾರ್ ಡಾಟಾವನ್ನು MySQL ಗೆ ವರ್ಗಾಯಿಸುವ ಯೋಜನೆ ಇದೆ.  

ಮೈಕ್ರೋಸಾಫ್ಟ್ ಎಂಬ ತಂತ್ರಜ್ಞಾನ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿದ skype - lite ಎಂಬ video - chatting ಆಪ್ ನ ಬಳಕೆಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯ  ಮಾಡಿದೆ.  

UIDAI ಪ್ರಾಧಿಕಾರವು ಇತ್ತೀಚಿಗೆ ಬಿಡುಗಡೆ ಗೊಳಿಸಿದ UCL ಅಂದರೆ ಅಪ್ಡೇಟ್ ಲೈಟ್ ಕ್ಲೈಂಟ್ ತಂತ್ರಾಂಶದ ಪರಿಣಾಮವಾಗಿ ಆಧಾರ್ ಕಾರ್ಡ್ನಲ್ಲಿನ ದೋಷಗಳನ್ನು ಸರಿಪಡಿಸಲು  ಅಥವಾ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಭಾವಚಿತ್ರ  ಇತ್ಯಾದಿಗಳ ತಿದ್ದುಪಡಿಗೆ ಮೊದಲಿನಂತೆ  ೧೫-೨೦ ದಿನಗಳವರೆಗೆ ಕಾಯಬೇಕಾಗಿಲ್ಲ. ಸೂಕ್ತ ದಾಖಲೆಗಳನ್ನು ಕೊಟ್ಟರೆ ಕೇವಲ ೨-೩ ಗಂಟೆಗಳಲ್ಲಿ ಆಧಾರ್ ಅಪ್ಡೇಟ್ ಮಾಡಿಕೊಡಲಾಗುತ್ತಿದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಇಲ್ಲಿ ನಿಮ್ಮ ಆಧಾರ್ ಸಂಖ್ಯೆ ಬದಲಾಗುವುದಿಲ್ಲ.  ಈ ತಂತ್ರಾಂಶ ಗ್ರಾಮ ಪಂಚಾಯತಿ ಕಚೇರಿ, ನೆಮ್ಮದಿ ಕೇಂದ್ರ, ಆಧಾರ್ ನೋಂದಣಿ ಕೇಂದ್ರ, ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಲಭ್ಯವಿದ್ದು Single  Finger ಬಯೋ-Metric Authentication Device ಅನ್ನು ಬಳಸಿ ನಿಗದಿ ಪಡಿಸಿರುವ ಶುಲ್ಕವನ್ನು ಪಾವತಿಸಿದರೆ ತಕ್ಷಣವೇ updated e -ಆಧಾರ್ ನಮ್ಮ ಕೈಸೇರಲಿದೆ.    

ಕೊನೆಯದಾಗಿ ಹೇಳುವುದಾದರೆ 12 ಅಂಕೆಗಳ ಆಧಾರ್ ಪ್ರತಿಯೊಬ್ಬ ಭಾರತೀಯನ ಗುರುತು ಹಾಗೂ ಹೆಮ್ಮೆಯ ಸಂಖ್ಯೆಯಾಗಿ ಮಾರ್ಪಟ್ಟಿದೆ. ಅನೇಕ ಸೇವೆಗಳ ಆಧಾರ ಸ್ಥಂಭವಾಗಿ ಹಾಗೂ ಅಪಾರ ಪ್ರಯೋಜನಗಳನ್ನು ಪಡೆಯುವ ಸೇತುವೆಯಾಗಿಯೂ ಆಧಾರ್ ಕಾರ್ಡ್ ಪ್ರಾಮುಖ್ಯತೆ ಪಡೆದಿದೆ. ಆಧಾರ್ ಕಾರ್ಡ್ ನಿಂದಾಗಿ ನಾವು ಖಾಸಗಿ ಮತ್ತು ಸರಕಾರಿ ಸೇವೆಗಳನ್ನು presence -less  ಅಂದರೆ ನಮ್ಮ ಉಪಸ್ಥಿತಿ ಇಲ್ಲದೆ ಅಥವಾ paper -less  ಅಂದರೆ ಕಾಗದ ರಹಿತವಾಗಿ ಅಥವಾ cash -less  ಅಂದರೆ ನಗದು ರಹಿತವಾಗಿಯು ಕೂಡ ಬಳಸಬಹುದು.   ಒಟ್ಟಿನಲ್ಲಿ ಆಧಾರ್ನಿಂದಾಗಿ ಭಾರತ ದೇಶದ ಸುಭದ್ರತೆ, ಸುಸ್ಥಿರತೆ, ಸುಕ್ಷೇಮ ಸಾಧ್ಯ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ನಾಗರೀಕ ಸೇವೆಗಳನ್ನು ಪಡೆಯುವಾಗ ಆಧಾರ್ ಲಿಂಕ್ ಮಾಡಿದರೆ  ಭ್ರಷ್ಟಾಚಾರ, ದುರುಪಯೋಗ, ಕ್ರಿಮಿನಲ್ ಅಪರಾಧ ಇತ್ಯಾದಿಗಳು ಗಣನೀಯವಾಗಿ ಕಡಿಮೆಯಾಗಲಿವೆ.

ಹೆಚ್ಚಿನ ಮಾಹಿತಿಗಾಗಿ uidai.gov.in ಜಾಲತಾಣಕ್ಕೆ ಭೇಟಿ ಕೊಡಿ.

ಧನ್ಯವಾದಗಳು

 

References:

  1. https://uidai.gov.in
  2. https://en.wikipedia.org/wiki/Aadhaar
  3. http://kannada.oneindia.com
  4. https://translate.google.com
  5. http://www.vijaykarnatakaepaper.com
  6. https://epapervijayavani.in
  7. https://dastikop.blogspot.in
  8. https://www.crazyengineers.com/threads/indias-first-blast-proof-building-at-bangalore-will-be-the-aadhaar-data-center.68828

Some more points

  1. Scholarships + aadhaar
  2. Aadhaar compulsory for new mobile connections
  3. De-duplication